ಸೋಮವಾರಪೇಟೆ,ಜ.26: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮಾಜೀ ಸೈನಿಕರನ್ನು ಪೆರೇಡ್‍ಗೆ ಬಳಸಿಕೊಂಡ ತಾಲೂಕು ಆಡಳಿತ, ನಂತರ ಅವರನ್ನು ಕಡೆಗಣಿಸಿದ್ದು ಸ್ಪಷ್ಟವಾಗಿ ಕಂಡುಬಂತು. ಕಳೆದ ಕೆಲ ವರ್ಷಗಳಿಂದ ಇಲ್ಲಿನ ಜೈ ಜವಾನ್ ಮಾಜೀ ಸೈನಿಕರ ಸಂಘದ ಸದಸ್ಯರು ಯಾವದೇ ರಾಷ್ಟ್ರೀಯ ಹಬ್ಬಗಳಿದ್ದರೂ ಶಿಸ್ತು ಬದ್ಧವಾದ ಸಮವಸ್ತ್ರದೊಂದಿಗೆ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡುತ್ತಾ ಬಂದಿದ್ದಾರೆ. ಮಾಜೀ ಸೈನಿಕರ ಸಂಘದ ಬಗ್ಗೆ ಸಾರ್ವಜನಿಕ ವಲಯದಲ್ಲೂ ಗೌರವಪೂರ್ವಕ ಅಭಿಮಾನವಿದೆ.

ಆದರೆ ಇಂದು ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಇವರನ್ನು ಪೆರೇಡ್‍ಗೆ ಬಳಸಿಕೊಂಡು ಗೌರವ ವಂದನೆ ಸ್ವೀಕರಿಸಿದವರು ನಂತರ ಇವರತ್ತ ಗಮನವನ್ನೇ ಹರಿಸದೇ ನಿರ್ಲಕ್ಷ್ಯತೆ ವಹಿಸಿದರು.

ಪೆರೇಡ್ ನಂತರ ಮಾಜೀ ಸೈನಿಕರಿಗೆ ಕನಿಷ್ಟ ಕುಳಿತುಕೊಳ್ಳಲು ಆಸನದ ವ್ಯವಸ್ಥೆಯನ್ನೂ ಕಲ್ಪಿಸಿರಲಿಲ್ಲ. ಇದರಿಂದಾಗಿ ಮಾಜೀ ಸೈನಿಕರು ಮೈದಾನದ ಮೂಲೆಯಲ್ಲಿ ಕೆಲ ಗಂಟೆಗಳ ಕಾಲ ನಿಂತುಕೊಂಡೇ ಇದ್ದರು. ಅತ್ತಲಿದ್ದ ಮೈಕಿನಲ್ಲಿ ದೇಶದ ಸೈನಿಕರ ಬಗ್ಗೆ ಅಭಿಮಾನದ ಮಾತುಗಳು ತೂರಿಬರುತ್ತಿದ್ದರೆ, ದೇಶ ರಕ್ಷಣೆ ಮಾಡಿ ತಾಯ್ನಾಡಿಗೆ ಮರಳಿರುವ ಸೈನಿಕರು ಅವುಗಳನ್ನು ಸಾವಧಾನದಿಂದ ಕೇಳಿಸಿಕೊಳ್ಳುವದಕ್ಕೂ ಆಗಲಿಲ್ಲ.

ಸುಮಾರು ಒಂದೂವರೆ ಗಂಟೆಗಳ ಕಾಲ ನಿಂತುಕೊಂಡೇ ಇದ್ದ ಮಾಜೀ ಸೈನಿಕರು ನಂತರ ಮನೆಕಡೆ ಹೆಜ್ಜೆ ಹಾಕಿದರು. ಇತ್ತ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ 30ಕ್ಕೂ ಅಧಿಕ ಮಂದಿ ಆಸೀನರಾಗಿದ್ದರು. ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಸದಸ್ಯರು, ಅವರ ಕುಟುಂಬಸ್ಥರು, ತಾಲೂಕು ಆಡಳಿತದ ಸಿಬ್ಬಂದಿಗಳು, ಶಿಕ್ಷಕರು ಹಾಗೂ ಇಲಾಖಾ ಸಿಬ್ಬಂದಿಗಳೇ ವೇದಿಕೆಯಲ್ಲಿ ತುಂಬಿ ಹೋಗಿದ್ದರು.

ಸೋಮವಾರಪೇಟೆ ವ್ಯಾಪ್ತಿಯ ವಿವಿಧ ಶಾಲಾ ಕಾಲೇಜುಗಳಿಂದ ವಿದ್ಯಾರ್ಥಿಗಳು, ಪೋಷಕರು, ನೂರಾರು ಸಾರ್ವಜನಿಕರು ಮೈದಾನದ ಮೇಲ್ಭಾಗದಲ್ಲಿ ಆಸೀನರಾಗಿ ವಿದ್ಯಾರ್ಥಿಗಳ ನೃತ್ಯ ಸ್ಪರ್ಧೆ ವೀಕ್ಷಿಸಲು ಉತ್ಸುಕರಾಗಿದ್ದರೆ, ವೇದಿಕೆಯಲ್ಲಿದ್ದ 30 ಮಂದಿಯ ಎದುರು ಶಾಲಾ ಕಾಲೇಜಿನ ವಿದ್ಯಾರ್ಥಿಗಳು ನೃತ್ಯ ಪ್ರದರ್ಶಿಸಬೇಕಾಯಿತು. ಇದರೊಂದಿಗೆ ಸಣ್ಣ ವಯಸ್ಸಿನ ವಿದ್ಯಾರ್ಥಿಗಳೂ ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರೂ ಕನಿಷ್ಟ ಪಕ್ಷ ಕುಡಿಯುವ ನೀರಿನ ವ್ಯವಸ್ಥೆಯನ್ನೂ ಕಲ್ಪಿಸದೇ ಕಾರ್ಯಕ್ರಮ ಸಂಘಟಿಸಲಾಗಿತ್ತು.

-ವಿಜಯ್